ದಾಸಗುಪ್ತ, ಸುರೇಂದ್ರನಾಥ
1885-1952. ಭಾರತೀಯ ತತ್ತ್ವಶಾಸ್ತ್ರಜ್ಞ, ಬಂಗಾಳದ ಸಂಸ್ಕøತ ವಿದ್ವಾಂಸರ ಮನೆತನದಲ್ಲಿ ಜನಿಸಿದ ಇವರು 1908ರಲ್ಲಿ ಕಲ್ಕತ್ತ ಸಂಸ್ಕøತ ಕಾಲೇಜಿನಿಂದ ಎಂ.ಎ. ಪದವಿ ಗಳಿಸಿದರು. 1910ರಲ್ಲಿ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದು, ಚಿತ್ತಗಾಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಸಂಸ್ಕøತ, ಪ್ರಾಕೃತ, ಪಾಲೀ ಭಾಷೆಗಳಲ್ಲಿರುವ ಮೂಲ ಶಾಸ್ತ್ರಗ್ರಂಥಗಳ ಕೂಲಂಕುಷ ಅಧ್ಯಯನವನ್ನಾಧರಿಸಿ ಇವರು ಭಾರತೀಯ ಶಾಸ್ತ್ರದ ಇತಿಹಾಸವನ್ನು ಐದು ಬೃಹತ್ಸಂಪುಟಗಳಲ್ಲಿ ಬರೆದು ವಿಶ್ವ ವಿಖ್ಯಾತರಾಗಿದ್ದಾರೆ. ಇದನ್ನು ಕೇಂಬ್ರಿಜ್ ವಿಶ್ವವಿದ್ಯಾಲಯ ಪ್ರಕಟಿಸಿದೆ. 1920ರಲ್ಲಿ ಇವರಿಗೆ ಡಾಕ್ಟರೇಟ್ ಪದವಿ ದೊರೆಯಿತು. 1920ರಿಂದ 1939 ರ ಅವಧಿಯಲ್ಲಿ ಇವರು ಬ್ರಿಟನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಕೆಲವು ಕಾಲ ಅಧ್ಯಾಪಕರಾಗಿದ್ದರು. ಜರ್ಮನಿ, ಫ್ರಾನ್ಸ್, ಇಟಲಿ, ಪೋಲಂಡ್ ಮುಂತಾದ ಯುರೋಪಿನ ದೇಶಗಳ ಮುಖ್ಯ ವಿಶ್ವವಿದ್ಯಾಲಯಗಳಲ್ಲೆಲ್ಲ ಭಾರತೀಯ ತತ್ತ್ವಶಾಸ್ತ್ರದ ಜ್ಞಾನನಿಧಿಯೆಂದು ಗೌರವಿಸಲ್ಪಟ್ಟರು. 1941ರಿಂದ 1942ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರದ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದರು. 1945ರಲ್ಲಿ ಬ್ರಿಟನ್ನಿನ ಎಡಿನ್‍ಬರೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ನೇಮಕಗೊಂಡು 1952ರವರೆಗೆ ವಿದೇಶದಲ್ಲಿಯೇ ಇದ್ದರು. ಇವರು ಬೃಹಗ್ಗ್ರಂಥದಲ್ಲಿ ವೇದಕಾಲದಿಂದ ಹಿಡಿದು 18ನೆಯ ಶತಮಾನದವರೆಗೆ ಸಕಲ ಶಾಸ್ತ್ರಗಳ ಮೂಲಗ್ರಂಥ ಟೀಕೆ ಟಿಪ್ಪಣಿಗಳ ಐತಿಹಾಸಿಕ ವಿವೇಚನೆ, ತತ್ತ್ವವಿಕಾಸದ ನಿರೂಪಣೆಗಳು ವಿದ್ವತ್ ಪೂರ್ಣವಾಗಿ ಬಂದಿವೆ. ಇಂಡಿಯನ್ ಐಡಿಯಲಿಸಮ್ ಎಂಬುದು ಇವರ ಇನ್ನೊಂದು ಗ್ರಂಥ. ಬಂಗಾಳಿಯಲ್ಲಿ ಇವರು ಸೌಂದರ್ಯಶಾಸ್ತ್ರವನ್ನೂ ಬರೆದಿದ್ದಾರೆ. 
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ